ಇತ್ತೀಚೆಗೆ ಏನಾದರು ಓದಬೇಕು ಬಿಡುವಿನ ಸಮಯದಲ್ಲಿ ಅಂತ ಅನಿಸಿ, ಸಪ್ನಾ ಬುಕ್ ಹೌಸ್'ನಿಂದ ಕೆಲವು ಪುಸ್ತಕಗಳನ್ನು ತರಲು ಹೋದಾಗ ಅಲ್ಲಿ ಶಿವರಾಮ ಕಾರಂತರ ಜ್ಞಾನಪೀಠ ಪುರಸ್ಕ್ರತ 'ಮೂಕಜ್ಜಿಯ ಕನಸುಗಳು' ನನ್ನ ಕಣ್ ಸೆಳೆಯಿತು. ಸುಮಾರು ಮುನ್ನೂರು ಪುಟಗಳ ಚಿಕ್ಕ ಕಾದಂಬರಿ, ಅದರಲ್ಲಿ ಜ್ಞಾನಪೀಠ ತಗೊಳ್ಳುವಷ್ಟು ಸಾಹಿತ್ಯ ಇದ್ದಲ್ಲಿ ಅದನ್ನು ನಾವು ಓದದೇ ಇದ್ದರೆ ಹೇಗೆ ಎಂದು ಅನಿಸಿ ಮನೆಗೆ ತಂದೆ. ತಂದ ನಂತರ ಓದಲು ಸಮಯವೇ ಸಿಗದೆ ಅದು ಒಂದೆರಡು ತಿಂಗಳು ಹಾಗೆಯೆ ಉಳಿಯಿತು. ನಾನು ಕೋರಿಯಾದಿಂದ ಬಂದ ನಂತರ ಮತ್ತೆ ಅದರ ನೆನಪಾಗಿ ಓದಲು ಎತ್ತಿಕೊಂಡೆ. ಮೂಕಜ್ಜಿ ಎಂಬ ಹೆಸರೇ ಆ ಕಾದಂಬರಿಯನ್ನು ಆಕರ್ಷಕವಾಗಿ ಮಾಡಿದೆ ಎಂದರೆ ತಪ್ಪಾಗಲಾರದು.
ಕುಂದಾಪುರ

ಈ ಪುಸ್ತಕ ನಮಗೆ ಮಾನವ ಜೀವನ, ಇತಿಹಾಸ, ಧಾರ್ಮಿಕ ನಂಬಿಕೆಗಳು, ಮಾನವ ಸಹಜ ನಡವಳಿಕೆಗಳು, ಸಂಸಾರ ಮತ್ತು ಆದ್ಯಾತ್ಮ ಮುಂತಾದುವುಗಳ ಬಗ್ಗೆ ಒಂದು ಹೊಸ ಕಲ್ಪನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ. ಅಜ್ಜಿ ಎಂಬ ಪಾತ್ರ ನಿಜವಾಗಲೂ ಒಂದು ಅದ್ಭುತ ಕಲ್ಪನೆ, ಅವಳ ಕನಸುಗಳಲ್ಲಿ ಸಮಾಜವನ್ನು ತಿದ್ದುವ ಪ್ರಯತ್ನ ಇದೆ. ಅವಳು ಸಾವಿರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿ, ದೇವರು ನಮ್ಮ ಸೃಷ್ಟಿ ಎಂಬುದನ್ನು ಎಲ್ಲರಿಗು ಅರ್ಥವಾಗುವ ಬಾಷೆಯಲ್ಲಿ ಹೇಳಿದ್ದಾರೆ. ಇದಕ್ಕೆ ಜ್ಞಾನಪೀಠ ನೀಡಿದ್ದು ಅವರ ಪ್ರತಿಭೆಗೆ ಸಂದ ಗೌರವ. ಇದೊಂದು ಅದ್ಬುತ ಗ್ರಂಥ. ಎಲ್ಲರು ಕೊಂಡು ಓದಿ ಸಂಗ್ರಹಿಸಿಟ್ಟು ಮುಂದಿನ ಪೀಳಿಗೆಗೆ ತಲುಪಿಸಬೇಕಾದ ಗ್ರಂಥ.