Pages

... W E L C O M E   T O   P R A S A D ' s   W E B P A G E ...

Friday, May 19, 2006

ಬಾಲ್ಯದ ನೆನಪುಗಳು


ಬಾಲ್ಯದ ನೆನಪುಗಳೇ ಮಧುರ. ಅದ ಬಣ್ಣಿಸಲು ಶಬ್ದಗಳೇ ಸಾಲದು, ಆ ಮೋಜಿನ ದಿನಗಳು ಮತ್ತೆ ಬಂದಾವೆ?.. ಆ ಸಂತಸದ ಕ್ಷಣಗಳ ಅಮರ ಮಧುರ ನೆನಪುಗಳ ಮೆಲುಕು ಹಾಕುವದೆ ಒಂದು ಹಿತಕರ ಅನುಭವ. ಆ ದಿನಗಳಲ್ಲಿ ಆಡದ ಆಟಗಳಿವೆಯೆ? ಅದ ಹಂಚಿಕೊಳ್ಳಲೆಂದೇ ಈ ಸಾಲುಗಳು.

ನೆನಪುಗಳು ಈಗಲೂ ಹಚ್ಚಹಸಿರು. ಆ ಆಟಗಳಲ್ಲಿದ್ದ ತನ್ಮಯತೆ ಈಗ ಮಾಡುವ ಕೆಲಸದಲ್ಲಿ ಸಹ ಇರಲಿಕ್ಕಿಲ್ಲ.

ಆಗಷ್ಟೆ ಜನಗಳ ಕೈಯಲ್ಲಿ ಸ್ವಲ್ಪ ಹಣ ಜಣಜಣಿಸುತ್ತಿದ್ದ ಕಾಲ, ಸುತ್ತಮುತ್ತಲಿನವರು ಹಳೇ ಮನೆಯನ್ನ ಕೆಡವಿ ಹೊಸ ಮನೆಕಟ್ಟುವ ಬರದಲ್ಲಿದ್ದರು. ಆದರಲ್ಲಿ ಮೊದಲು ನಮ್ಮ ಮೆಲ್ಮನೆಯಿರಬೇಕು, ನಮ್ಮ ದಾಯಾದಿಗಳು! ಮನೆ ಕಟ್ಟುವುದನ್ನ ನೋಡುವುದೆಂದರೆ ಮಕ್ಕಳಿಗಂತೂ ಒಂದು ವಿಶೇಷವೇ ಸರಿ. ಜಾಸ್ತಿ ಹಣ ಕೊಟ್ಟು ಕೆಂಪು ಕಲ್ಲು ತರಲು ತಾಕತ್ ಇಲ್ಲದವರ ಮನಸ್ಸಲ್ಲಿ ಹೊಳೆಯುವುದೇ ಮಣ್ಣಿನ ಇಟ್ಟಿಗೆ. ನಮ್ಮಂತ ಚಿಕ್ಕ ಮಕ್ಕಳ ಕಣ್ಣು ಆ ಇಟ್ಟಿಗೆ ಮಾಡುವ ಅಚ್ಚಿನ ಮೇಲೆ.

ಮನೆಗೆ ಬಂದು ನಾವು ಒಂದು ಖಾಲಿ ಬೆಂಕಿ ಪಟ್ಟಣ ತೆಗೆದುಕೊಂಡು ಅದರ ತಳ ತೆಗೆದು ಅದನ್ನ ಚಿಕ್ಕ ಇಟ್ಟಿಗೆಯ ಅಚ್ಚಿನ ಹಾಗೆ ಮಾಡಿ, ಮಣ್ಣು ಕಲಸಿ, ಇಟ್ಟಿಗೆ ಮಾಡುತಿದ್ದೆವು. ನಾನು, ಸತೀಶ ಮತ್ತೆ ಕೃಷ್ಣ. ನಮ್ ಮೂರ್ ಜನಕ್ಕೆ ಇದೆ ಕೆಲಸ. ಶಾಲಿ ಬಿಟ್ಟ್ ಬಂದವರೆ ಊಟ ಮಾಡಿ, ಇಟ್ಟಿಗೆ ಮಾಡಲಿಕ್ಕೆ ಶುರು. ಮನೆಯಲ್ಲೆಲ್ಲ ಬೈದರೂ ಕೇಳ್ತಾ ಇರಲಿಲ್ಲ. ಹೀಗೆ ರೆಡಿಯಾದ ಇಟ್ಟಿಗೆಗೆ ಒಂದೆರಡು ಬಿಸಿಲು ಬೀಳಬೇಕು, ಆಗಲೇ ಅದು ಹದವಾಗಿ ಮನೆ ಕಟ್ಟಲು ಯೋಗ್ಯವಾಗುವದು.

ಮೊದಮೊದಲು ಚಿಕ್ಕಚಿಕ್ಕ ಮನೆಗಳನ್ನು ಕಟ್ಟುತಿದ್ದ ನಾವು, ನಂತರ ಪರಿಣತಿ ಹೊಂದಿ ಮಹಡಿ ಮನೆಗಳನ್ನು ಕಟ್ಟುತಿದ್ದೆವು. ಮನೆಯವರೆಲ್ಲ ಅದನ್ನ ನೋಡಿ ಬೆರಗಾಗಿದ್ದು ಇದೆ. ಮತ್ತೆ ಅದಕ್ಕೆ ಕೆಂಪು ಕಾವಿ ನೆಲ ಅಗಬೇಕಲ್ಲ? ಅದಕ್ಕೆ ಸುಡುಮಣ್ಣಿನ ಕೆಂಪು ಮಣ್ಣು, ಕಪ್ಪು ಮಣ್ಣು ತಂದು, ಮನೆಯಲ್ಲಿ ಮಾಡೀದ ಹಾಗೆ ನೆಲ ಸಹ ಮಾಡುತ್ತಿದ್ದೆವು. ಈಗಿನ ಮಕ್ಕಳಿಗೆ ಇದೆಲ್ಲ ತಲೆಗೆ ಹೊಳೆದೀತೆ? ಬರಿಯ ಸೈಕಲ್ ಆಟ, ಕಾರ್ಟೂನ್ ನೋಡುವದನ್ನ ಬಿಟ್ಟು!

ಮತ್ತೆ ಈ ಮನೆ ಚಿಕ್ಕದು ಅಂತ ಅನ್ನಿಸಿದ್ದರಿಂದ ದೊಡ್ಡ ಮನೆ ಕಟ್ಟುವ ದೊಡ್ಡ ದೊಡ್ಡ ಆಲೋಚನೆಗಳು ನiಲ್ಲಿ ಸುಳಿಯಲಾರಂಬಿಸಿದವು. ಗಂಟಿ ಹಿಂಡಿನಲ್ಲಿ ಮಡಲ ಚಪ್ಪರ ಹಾಕಿ ಮನೆ ಮಾಡುವದು ಒಂದು ಆಟವಾಗಿತ್ತು. ಕಟ್ಟಿದ ಮನೆಯ ಒಕ್ಕಲು ಮಾಡಲಿಕ್ಕೆ ಪೂಜೆ ಮಾಡಿದ್ದು, ಮನೆ ಒಕ್ಕಲು ಊಟ ಅಂತ ಹೇಳಿ ಹಲಸಿನ ಹಣ್ಣಿನ ಕಡಬು ಮಾಡಿ ತಂದು ಎಲ್ಲಾ ಹಂಚಿ ತಿಂದದ್ದು ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಇದೆ.

ಇದಕ್ಕೂ ಮೊದಲಿರಬೇಕು, ಮಳೆಗಾಲ ಮುಗಿದ ಹೊಸತರಲ್ಲಿ, ಅಂದರೆ ಡಿಸೆಂಬರ್ ಸಮಯದಲ್ಲಿ ಗದ್ದೆಯೆಲ್ಲ ಹೂಡಿ ಹಾಕಿ ದೊಡ್ಡ ದೊಡ್ಡ ಸೆಟ್ಟೆ (ಮಣ್ಣಿನ ಉಂಡೆ) ಎದ್ದಿರುತ್ತಿದ್ದವು. ಅದನ್ನ ಎತ್ತಿ ಮನೆ ಕಟ್ಟುವದು ಒಂದು ಬಗೆಯ ಆಟ. ಪ್ರತಿಯೊಬ್ಬರು ಒಂದೊಂದು ತರದ ಮನೆ. ಮನೆಗೆ ಒಂದೆ ಕೊರತೆ ಎಂದರೆ ಮಾಡು ಇರುತ್ತಿರಲಿಲ್ಲ! ಮನೆಯಲ್ಲಿ ಬೇರೆ ಬೇರೆ ಅಡುಗೆ! ಎಲ್ಲ ಮಣ್ಣಿನಲ್ಲಿ! ಭೂತದ ಕೋಲಾ ಎಲ್ಲದದರ ಅನುಕರಣೆ, ಹಿರಿಯರು ಮಾಡಿದ್ದನ್ನೆಲ್ಲ ಒಂದು ಚಿಕ್ಕದಾಗಿ ಮಾಡುವ ಚೊಕ್ಕ ಅಭ್ಯಾಸ.!

ಮಳೆಗಾಲದಲ್ಲಿ ಆಡುವ ಆಟಗೆಳೇ ಬೇರೆ, ನಾನು ಮತ್ತೆ ನನ್ನ ತಂಗಿ ಇಬ್ಬರೆ ಇದ್ರೆ ಸಾಕು, ನಾವಡುವ ಆಟಗಳಲಿ ನಮಗೆ ಅತಿ ಇಷ್ಟವಾದ ಆಟ ಅಂದ್ರೆ ಗೊಂಬೆ ಆಟ. ನಮ್ಮ ಹತ್ರ ಒಂದು ಸುಮಾರು ಚಿಕ್ಕ ಚಿಕ್ಕ ಗೊಂಬೆಗಳು ಮತ್ತೆ ಮನೆಯಲ್ಲಿ ಒಂದಿಷ್ಟು ಮರದ ಹಲಗೆಯ ಚೂರುಗಳಿದ್ದವು. ಅದರಲ್ಲೆ ಚಿಕ್ಕ ಚಿಕ್ಕ ಗೊಂಬೆ ಮನೆ ಕಟ್ಟಿ ಆಟವಾಡಿಸುತ್ತಿದ್ದೆವು. ಈ ಆಟ ನಮ್ಮಿಬ್ಬರ ಪ್ರೊಪ್ರೈಟರಿ ಆಂತಾನೆ ಹೇಳಬಹುದು. ಹಾಗೆ ನೋಡಿದ್ರೆ ನಮಗೆ ಪ್ಲಾಸ್ಟಿಕ್ ಗೊಂಬೆಗಳೇ ಬೇಕಂತ ಇರಲಿಲ್ಲ, ಯಾವ ಚಿಕ್ಕ ಖಾಲಿ ಬಾಟಲಿಯೂ ಆದೀತು. ಅದಕ್ಕೊಂದು ಹೆಸರಿಟ್ಟು ಅದನ್ನ ಆಚೆ ಈಚೆ ನೆಡೆಸಿ ದಿನ ಇಡಿ ಆಟವಾಡಿದರೂ ನಮಗೆ ಆ ಆಟದಲ್ಲಿ ಒಂದಿಷ್ಟು ಆಸಕ್ತಿ ಕಡಿಮೆಯಗಿರಲಿಕ್ಕಿಲ್ಲ. ಕೆಲವೊಮ್ಮೆ ಮನೆಯ ಎದುರುಗಡೆಯ ಕಲ್ಲ ರಾಶಿಯಲ್ಲಿ ಕಲ್ಲುಗಳನ್ನೆ ಗೊಂಬೆ ಮಾಡಿ ಆಡಿದ ದಿನಗಳೆಷ್ಟಿಲ್ಲ.

ಮನೆಯ ಕೆರೆ ತೋಡಿಸುವಾಗ, ಮಳೆಗಾಲದಲ್ಲಿ ಮರಳ ರಾಶಿಯಲ್ಲಿ ಬಾವಿ ತೋಡಿ ನೀರು ಕಂಡ ಖುಶಿಯ ದಿನಗಳೆಷ್ಟಿಲ್ಲ. ಮರಳಿನಲ್ಲಿ ಘಾಟ್ ರಸ್ತೆಗಳನ್ನ ಮಾಡಿ, ಒಂದು ಘಾಟ್‌ನಿಂದ ಇನ್ನೊಂದಕ್ಕೆ ಬ್ರಿಡ್ಜ್ ಕಟ್ಟಿ ಸಂತೋಷ ಪಟ್ಟ ದಿನಗಳಿಲ್ಲದಿಲ್ಲ. ಸಣ್ಣ ಸಣ್ಣ ಮಳೆಗಳನ್ನ ಲೆಕ್ಕಿಸದೆ ಕಲ್ಲ ರಾಶಿಯಲ್ಲಿ ಇಬ್ಬರು ಕುಳಿತುಕೊಂಡು ಆಡತೊಡಗಿದರೆ ಇತ್ತಿನ ಪ್ರಪಂಚದ ಗೊಡವೆಯೇ ಇರುತ್ತಿರಲಿಲ್ಲ. ಅಪ್ಪಯ್ಯ ಬಂದು ಜೋರು ಮಾಡಿ (ಗದರಿಸಿ) ಕರೆದಾಗಲೆ ನಾವು ಮನೆಕಡೆ ಬರುವದು.

ಈಗಿನ ವಿಷಯ ಅಷ್ಟು ಸರಿಯಾಗಿ ಗೊತ್ತಿಲ್ಲ, ಆದ್ರೆ ಆಗೆಲ್ಲ ಸಂಜೆಗೆ ಪಾಠ ಎಲ್ಲ ಮುಗಿದ ಮೇಲೆ, ನಮಗೆ ಆಗ ೪.೦೦ ಗಂಟೆಗೆ ಆಟಕ್ಕೆ ಬಿಡ್ತಾ ಇದ್ರು. ಐದು - ಆರನೆ ಕ್ಲಾಸಲ್ಲಿ ಇರಬೇಕಾದ್ರೆ ನಾಲ್ಕು ಗಂಟೆ ಆಗುತ್ತಲೆ ನಾವೇ ಹೋಗಿ ಬೆಲ್ ಹೋಡೆದು ಬರ್ತಾ ಇದ್ದೆವು. ನಮ್ಮ ಶಾಲೆಯಲ್ಲಿ ಎರಡು ಕಟ್ಟಡ ಇದ್ದು, ಹಳೆಕಟ್ಟಡದಲ್ಲಿ ಆಫೀಸ್ ರೂಮು ಇತ್ತು, ಅಲ್ಲಿಯೇ ಬೆಲ್ ನೇತು ಹಾಕಿದ್ರಿಂದ, ಆ ಕಟ್ಟಡದಲ್ಲಿದ್ದ ಕ್ಲಾಸಿನವರೆ ಬೆಲ್ ಹೊಡೆಯುವದು ರೂಡಿಕೆ. ಬೆಲ್ ಹೊಡೆಯುವದು ಅಂದ್ರೆ ಸಾಮಾನ್ಯ ಕೆಲಸ ಅಂತ ನಾವ್ಯಾರೂ ಅಂದುಕೊಂಡಿರಲಿಲ್ಲ. ಕೆಲವು ಸಲ ಬೆಲ್ ಹೊಡೆಯಲ್ಲಿಕ್ಕಂತಲೇ ಕಾದು ಕುಳಿತುಕೊಳ್ಳುವ ಪ್ರಸಂಗವೂ ಇತ್ತು. ಯಾಕೆ ಅಂದ್ರೆ, ಬರಿ ಒಂದ್ ಸಲ ಬೆಲ್ ಹೊಡಿಯೋದಲ್ಲ, ಜನಗಣ (ರಾಷ್ಟ್ರಗೀತೆ) ಶುರುವಾಗುವ ಮೊದಲು ನಾಲ್ಕೈದು ಸಲ ಬೆಲ್ ಹೊಡೆಯುವ ಕ್ರಮವಿತ್ತು. ಈಗ ಎಣಿಸಿದರೆ ನಗು ಬರ್ತದೆ. ಆದ್ರೆ ಆಗ ಆ ಬೆಲ್ ಹೊಡೆಯೋದೆ ಒಂದು ದೊಡ್ಡ ಕೆಲಸದ ಅಂತ ಭಾವಿಸಿದ್ವಿ.

ಮರೆಯಲಾದಿತೆ ಬಾಲ್ಯವನ್ನ, ಎಡೆಬಿಡೆದೆ ಸುರಿಯುತ್ತಲ್ಲಿದ್ದ ಜಡಿ ಮಳೆಯಲ್ಲೂ ಕೊಡೆಹಿಡಿದು ಹೋಗಿ, ಕಲ್ಲ ರಾಶಿಯಲ್ಲಿ ಆಡಿದ ಆ ದಿನಗಳ. ಮನೆಯೊಳಗೆ ಕೂತು ಕರಿದ ಹಪ್ಪಳ ಚಪ್ಪರಿಸುವ ದಿನಗಳು ಅದೆಷ್ಟು ಚಂದ. ಶಾಲೆಗೆ ಹೋಗುವದು - ಬರುವದು ಎಂದರೆ ನಮಗದೊಂದು ಆಟದ ತರಹ ಇತ್ತು. ಈಗಿನ ಮಕ್ಕಳ ಹಾಗೆ ಹೊರಲಾರದ ಬಾರ ಹೊತ್ತುಕೊಂಡು, ಆಟೊದಲ್ಲಿ ತೂರಿಸಿಕೊಂಡು ಹೊಗುವ ಪರಿಸ್ಥಿತಿ ಇರಲಿಲ್ಲ. ದೀನಾಲು ಮನೆಯಿಂದ ಶಾಲೆಗೆ ನೆಡೆದೆ ಹೋಗುತ್ತಿದ್ದೆವು. ನಾವು ಐದಾರು ಮಕ್ಕಳು ಒಟ್ಟಿಗೆ ಶಾಲೆಗೆ ಹೋಗುವದು. ದಾರಿಯುದ್ದಕ್ಕೂ ನಮ್ಮದೆ ಪುರಾಣ.

ಕಪ್ಪು ಕಾರಿನಲ್ಲಿ ಬಂದು ಮಕ್ಕಳನ್ನ ಕದ್ದುಕೊಂಡು ಹೊಗ್ತಾರೆ ಅನ್ನುವದನ್ನ ನಂಬಿ, ಕಪ್ಪು ಕಾರು ಕಂಡಾಗೆಲ್ಲ ಹಾಡಿ-ಗುಡ್ದಿ ಹತ್ತಿ ಒಡಿದ ದಿನಗಳು ಮತ್ತೆ ಬಂದೀತೆ?. ಮದ್ಯಾಹ್ನ ಮನೆಗೆ ಬಂದು ಊಟ ಮಾಡಿ ಹೋಗ್ತ ಇದ್ದ ಕಾಲ. ಈಗೆಲ್ಲ ಏನಿದ್ರೂ ಬುತ್ತಿ ಕೂಳು.

ಶಾಲೆಯಲ್ಲಿ ಪ್ರತಿ ಕ್ಲಾಸಿಗೊಬ್ಬ ಕ್ಲಾಸ್ ಲೀಡರ್. ರೀಡಿಂಗ್ ಬೆಲ್ ಆದ್ ಮೇಲೆ ಅವನದೆ ಕಾರುಬಾರು. ಉಸಿರೆತ್ತುವ ಹಾಗಿರಲಿಲ್ಲ. ಮಾತಾಡಿದರೆ ನಮ್ಮ ಹೆಸರು "ಹೆಸರು ಪಟ್ಟಿ"ಯಲ್ಲಿ ಬಿದ್ದ ಹಾಗೆ. ಸ್ವಲ್ಪ ಮಾತಾಡಿದರೆ ಬರಿ ಹೆಸರು, ಜಾಸ್ತಿಯಾದರೆ "ಹೆಚ್ಚು", ಇನ್ನೂ ಜಾಸ್ತಿಯಾದ್ರೆ "ಬಾರಿ ಹೆಚ್ಚು" ಎಂದೆಲ್ಲ ಹೆಸರಿನ ಮುಂದೆ ಸೇರಿಸುತಿದ್ದ. ಆದ್ರೆ ಅಲ್ಲಿ ತುಂಬಾ ನ್ಯಾಯ ಇತ್ತು ಅನ್ನುವ ಬಗ್ಗೆ ಎರಡು ಮಾತಿಲ್ಲ. ಯಾರೆ ಮಾತಡಿದರೂ ಹೆಸರು ಬರೆಯುವದು ಗ್ಯಾರಂಟಿ. ಮಾಷ್ಟರ ಬಗ್ಗೆ ಯಾರದ್ರು ಏನಾದ್ರು ಹೇಳಿದ್ರೆ ಅದನ್ನ ಹಾಗೆ ತಗೊಂಡು ಹೋಗಿ ಅವರತ್ರ ಹೇಳಿ ಬರುವ ಮುಗ್ಧ ಗುರುಭಕ್ತಿ. ಈಗಿನ ಮಕ್ಕಳಿಗೆ ಎಲ್ಲಿಂದ ಬರಬೇಕು.

ನಮ್ಮ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಾನುವಾರುಕಟ್ಟೆ. ಆಗೆಲ್ಲ ಖಾಸಗಿ ಶಾಲೆಗಳು ತುಂಬಾನೆ ಕಮ್ಮಿ. ಇದ್ರೂ ನಮ್ಮಂತವರ ಕೈಗೆಟುಕುವ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಹೆಚ್ಚಿನವರೆಲ್ಲ ಸರ್ಕಾರಿ ಶಾಲೆಯಲ್ಲೆ ಕಲಿಯಬೇಕಾದ ಅನಿವಾರ್ಯತೆ.

ಶಾಲೆಯಲ್ಲಿ ಕಳೆದ ದಿನಗಳು ಮರೆಯಲಾರದ ಸವಿದಿನಗಳು. ಪಾಠದ ಜೊತೆಜೊತೆಗೆ ಆಟ. ಒಂದನೆ ಕ್ಲಾಸಿನಲ್ಲಿದ್ದಾಗ ರಾಜು ಮಾಷ್ಟ್ರು ಅಂತ ಒಬ್ಬರು ಇದ್ರು, ಅವರು ಕಲಿಸುತ್ತಿದ್ದ ಹಾಡುಗಳು ಇನ್ನೂ ನೆನಪಿನಲ್ಲಿದೆ.

ದೊಡ್ಡ ಟೊಪ್ಪಿ ದೊರೆ
ಸೈಕಲ್ ಹತ್ತಿ ದೊರೆ
ಸೈಕಲ್ ಅತ್ತ, ಟೊಪ್ಪಿ ಇತ್ತ
ಧರೆಯ ಮೇಲೆ ದೊರೆ.

ಹಾಡು ಮುಗಿಯುತ್ತಿದ್ದಂತೆ ಒಬ್ಬರ ಮೇಲೊಬ್ಬರು ಬಿದ್ದುಬಿಡುತ್ತಿದ್ದೆವು. ಮತ್ತೆ ನಮ್ಮನ್ನ ಎದ್ದೆಳಿಸಲು ಕೋಲೇ ಬೇಕಿತ್ತು.

ಇನ್ನೊಂದು ಹಾಡು, ಈಗಲೂ ಕೂಡ ನಮ್ಮ ಕಡೆ ಶಾಲೆಯಲ್ಲಿ ಹೇಳಿ ಕೊಡ್ತಾ ಇರಬಹುದು. ನಮಗೆಲ್ಲ ಅಂಕಿ ಹೇಳಿಕೊಡಬೇಕಾದ್ರೆ ಈ ಹಾಡು ಹೇಳಿ ಕೊಟ್ಟಿದ್ರು.

ಒಂದು ಎರಡು ಬಾಳೆಲೆ ಹರಡು
ಮೂರು ನಾಲ್ಕು ಅನ್ನ ಹಾಕು
ಐದು ಆರು ಬೇಳೆ ಸಾರು
ಏಳು ಎಂಟು ಪಲ್ಯಕೆ ದಂಟು
ಒಂಭತ್ತು ಹತ್ತು ಎಲೆ ಮುರಿದೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು.

3 comments:

sandhya shetty said...

hi

sweet memories

Meeeeee... said...

ಬಾಲ್ಯದ ನೆನಪೇ ಮಧುರ..

Unknown said...

hi,
Sweet Memories..