ನನ್ನ ನೆನಪಿನಂಗಳದ ತುಂಬ ನೀನೇ ತುಂಬಿಕೊಂಡಿರುವೆ...
ಮನಸ್ಸಿಗೆ ಮುದ ನೀಡುವ ಪ್ರಕೃತಿ ಸೌಂದರ್ಯಕ್ಕೆಲ್ಲ ನೀನೇ ಉಪಮ.. ಹರಿಯುವ ನೀರಿನ ಝರಿಯಲ್ಲಿ ನಿನ್ನ ಕಿಲಕಿಲ ನಗೆಯ ಬೆಳ್ಳಿ ಕಿರಣಗಳ ಹೊಳಪು ಸೇರಿಕೊಂಡ ಕಲರವ.. ಮರಗಿಡಗಳ ಮೇಲಿನ ಬೆಳ್ಳಂಬೆಳಗಿನ ಇಬ್ಬನಿಯಿಂದ ಹೊರಚಿಮ್ಮಿದ ಬೆಳಕು ನಿನ್ನ ಮುಖಕಾಂತಿ.. ನಿನ್ನ ಸನಿಹ ಹುಣ್ಣಿಮೆಯ ಹಾಲು ಬೆಳಕಿನ ರಾತ್ರಿಯಂತೆ..
ನನ್ನ ಎದೆಯ ಬಣ್ಣಗಳಲ್ಲಿ ಮೂಡಿದ ಸಪ್ತವರ್ಣ ಚಿತ್ತಾರ ನೀನು.. ನಾ ಕಳೆವ ಪ್ರತಿ ಕ್ಷಣಗಳ ಮಧುರ ಸವಿನೆನಪು ನೀನು.. ನನ್ನ ಬದುಕಿನ ಬಣ್ಣಗಳಲ್ಲಿ ಮೂಡಿ ಬಂದ ಕಾಮನಬಿಲ್ಲು ನೀನು.. ಮರುಭೂಮಿಯಲ್ಲೂ ಹಸಿರು ಸೃಷ್ಟಿ ಮೂಡಿಸಬಲ್ಲ ಮುಂಗಾರಿನ ಸೊಂಪಾದ ಸೋನೆಮಳೆ ನೀನು.. ಮನಕ್ಕೆ ಉಲ್ಲಾಸ ನೀಡುವ ನಿದ್ರಾದೇವಿಯ ಮಡಿಲಂತೆ, ಎಲ್ಲ ಬದುಕಿನ ಬವಣೆಗಳ ಮರೆಸುವ ಸೃಷ್ಟಿಯ ಅನನ್ಯ ಶಕ್ತಿ ನೀನು..
ನಿನ್ನ ಆಗಮನದಿಂದ ನನ್ನ ಬದುಕೆ ಬದಲಾಯಿತು.. ಬರಡಾಗಿದ್ದ ಮನದ ಬಂಜರುಭೂಮಿಯಲ್ಲಿ ನಿನ್ನ ಪ್ರೀತಿ ಸ್ನೇಹಗಳ ಸೊಂಪಾದ ಸೋನೆಮಳೆ ಪ್ರೀತಿಯ ಹಸಿರು ಚಿಗುರನ್ನ ಮೂಡಿಸಿತು.. ನಿಸರ್ಗದ ಪ್ರತಿ ಸೃಷ್ಟಿಯೂ ನಿನ್ನಂತೆ ಪ್ರೇಮಪೂರ್ಣವಾಗತೊಡಗಿತು.. ಮನಕ್ಕೆ ನಿನ್ನ ಆಕರ್ಷಕ ನಗುವಿನ ನೆನಪುಗಳು ಪೌರ್ಣಿಮೆಯ ಚಂದ್ರನಂತೆ ತಂಪಾದ ಹಾಲ್ಬೆಳಕಿನ ಹುಗ್ಗಿಯನ್ನ ತಿನಿಸಿ ಬದುಕ ಸವಿಯಾಗಿಸಿತು...
ನಿನ್ನ ಜತೆ ಕಳೆದ ಬದುಕಿನ ಕ್ಷಣಗಳೇ ಮಧುರ.. ನಿನ್ನ ಪ್ರೀತಿಯ ಲಲ್ಲೆ ಮಾತುಗಳೇ ಅಮೃತ.. ನಿನ್ನ ಪ್ರೀತಿ ತುಂಬಿದ ನಯನಗಳ ನೋಟವೇ ಮನಸ್ಸಿಗೆ 'ದಿವ್ಯ' ಔಷಧ..
ಪ್ರತಿಯೊಬ್ಬ ಪುರುಷನ ಸಾಧನೆಯ ಹಿನ್ನೆಲೆಯಲ್ಲಿ ಒಬ್ಬಳು ಹುಡುಗಿ ಇರುವಳೆಂದ ಮಾತು ನಿನ್ನಿಂದ ನಿಜವೆನಿಸಿದೆ.. ನನ್ನ ಪ್ರತಿ ಸಾಧನೆಯ ಹಿಂದಿರುವ ಅದ್ರಶ್ಯ ಹುಡುಗಿ ನೀನೇ..
ನನ್ನದೆಯ ಬಾಂದಳದಿ ಚಿತ್ತಾರ ಬರೆದವಳೇ .. ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ.. ನನ್ನೊಳಗೆ ಹಾಡಾಗಿ ಹರಿದವಳೇ.. .. ನಿನಗೆಂದೇ ಬರೆದ ಕವಿತೆಯ ಸಾಲುಗಳಿವು..
ನೀನಿಲ್ಲದ ದಿನಗಳೀಗ ಕಳೆಯಲಾಗದ ಕಾರ್ಮೋಡ ಕವಿದ ಕಗ್ಗತ್ತಲೆಯಂತೆ ಬಾಸವಾಗುತ್ತಲಿದೆ. ನಿನ್ನ ಬಿಂಬಕ್ಕಾಗಿ ಕಂಗಳು ಹಾತೊರೆಯುತ್ತಿವೆ.. ನಿನ್ನ ಮುದ್ದು ಮಾತುಗಳಿಗೆ ಕಿವಿಗಳು ದಾರಿಕಾಯುತ್ತಿವೆ.. ನಿನ್ನ ಬಂಧಿಸಲು ಬಾಹುಗಳು ಸಿದ್ದವಾಗಿ ನಿನ್ನ ಆಗಮನದ ನೀರಿಕ್ಷೆಯಲ್ಲಿ ಸೊರಗಿವೆ.. ನಿನ್ನ ಅದರದ ಸವಿಗೆ ನನ್ನ ಅದರಗಳು ತವಕಗೊಂಡಿವೆ.. ವಿರಹ ತಾಳಲಾರದೆ ಹೃದಯ ತತ್ತರಿಸಿದೆ.. ನಿನ್ನೊಡನೆ ಮುದ್ದು ಮಾತಿನ ಮಳೆಗೆರೆಯಲು ಕನಸುಗಳ ಕಾರ್ಮೋಡಗಳನ್ನ ಹೊತ್ತು ತುಟಿಗಳು ಬಾರವಾದಂತೆ ಬಾಸವಾಗಿದೆ..
ನನ್ನೆದೆಯ ಕದ ತೆಗೆದು.. ಹೊಂಗನಸುಗಳ ತಳಿರು ತೋರಣದಿಂದ ನಿನಗೆ ಸ್ವಾಗತ ಬಯಸುತ್ತ, ನಿನ್ನ ಬರುವಿಕೆಯ ದಾರಿ ಕಾಯುತ್ತಿದ್ದೆನೆ.. ಪ್ರತಿ ಉಸಿರಲ್ಲೂ ನಿನ್ನ ನೆನಪು ತುಂಬಿದೆ.. ನೀ ನನ್ನ ಬಂದು ಸೇರಿ ನನ್ನ ಬದುಕಲ್ಲಿ ಒಂದಾಗಿಹೋಗುವ ಆ ಸುಮಧುರ ಗಳಿಗೆಗಾಗಿ ಕಾದಿರುವ..
ನಿನ್ನ ಪ್ರೀತಿಯ ..