Pages

... W E L C O M E   T O   P R A S A D ' s   W E B P A G E ...

Sunday, March 14, 2010

ಮೈ ಮನಗಳ ಸುಳಿಯಲ್ಲಿ


ಶಿವರಾಮ ಕಾರಂತರ ಕಾದಂಬರಿಗಳಲ್ಲಿ ನನಗೆ ತುಂಬಾ ಇಷ್ಟವಾಗುವ ವಿಷಯಗಳೆಂದರೆ, ಅದರಲ್ಲಿ ಬರುವ ಎಲ್ಲ ಸ್ಥಳಗಳು ನಮ್ಮ ನೆರೆಕೆರೆಯದು. ಅಲ್ಲಿನ ಬಗ್ಗೆ ನಮ್ಮ ಹಿರಿಯರಿಂದ ಹೇಳಿ-ಕೇಳಿರುವಂತದು. ಹಾಗಾಗಿ ಆ ಕಾದಂಬರಿಗಳನ್ನು ಓದುತ್ತ ಹೋದಂತೆ, ನಮ್ಮೂರಲ್ಲೆ ನೂರಿನ್ನೂರು ವರ್ಷ ಹಿಂದೆ ಸರಿದು ಆಗಿನ ಜನಜೀವನ ಮದ್ಯೆ ನಿಂತು ಅವಲೋಕಿಸಿದಂತೆ ಬಾಸವಾಗುತ್ತದೆ.

ಅವರ ಪಾತ್ರಗಳು ತುಂಬಾ ನೈಜವಾಗಿದ್ದು, ಯಾವುದೇ ನಾಟಕೀಯ ಆದರ್ಶಗಳನ್ನು ತುಂಬುವ ಪ್ರಯತ್ನ ಇರುವದಿಲ್ಲ. ಇದರಿಂದಾಗಿ ಅವರೊಬ್ಬ ನಿಷ್ಪಕ್ಷಪಾತಿ ಸಾಹಿತಿ ಎನಿಸುತ್ತಾರೆ. ಸಹಜ ಮನುಷ್ಯ ಗುಣಗಳೇ ಕಾದಂಬರಿಯ ಪಾತ್ರಗಳಲ್ಲಿ ಕಾಣುವುದರಿಂದ ನಮ್ಮನ್ನು ನಾವು ಅಲ್ಲಿ ಕಂಡುಕೊಳ್ಳುವುದು ತುಂಬ ಸುಲಭ.

ಮೈ ಮನಗಳ ಸುಳಿಯಲ್ಲಿ ಕಾದಂಬರಿ ಕುಂದಾಪುರ ಸಮೀಪದ ಬಸ್ರೂರು ಎಂಬ ಊರಿನಲ್ಲಿ ಸುಮಾರು ನೂರು ವರ್ಷ ಕೆಳಗೆ ಬದುಕಿದ್ದ ಒಬ್ಬ ಮಂಜುಳೆ ಎಂಬ ವಾರಂಗನೆಯ ಸುತ್ತ ಸುತ್ತುತ್ತದೆ. ಇಲ್ಲಿ ಗಂಡು ಹೆಣ್ಣಿನ ನಿಕಟವರ್ತಿ ಬಾಳನ್ನು ಮಂಜುಳೆ ಎಂಬ ಗರತಿಯಲ್ಲದವಳ ’ಆತ್ಮಕಥೆ’ಯ ಮೂಲಕ ಹೇಳಿದ್ದಾರೆ. ಕಾದಂಬರಿಯ ಹೆಚ್ಚಿನ ಬಾಗ ಮಂಜುಳೆಯ ಆತ್ಮಕತೆಯೇ ಆಗಿದೆ. ಸೂಳೆಯೊಬ್ಬಳಿಂದ ಆತ್ಮ ಕತೆ ಬರೆಸುವ ಸಾಹಸ ಕಾರಂತರು ಮಾಡಿ, "ಆವಳು ಆತ್ಮ ಕತೆ ಬರಯಬಲ್ಲಳೇ?, ಬರೆದಿದ್ದಾದರು ಯಾರಿಗಾಗಿ?" ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಾದಂಬರಿಯಲ್ಲಿ ನೀಡಿದ್ದಾರೆ.

ಹಳೆಕಾಲದ ರಾಜಾಶ್ರಯ, ವೀರಾಶ್ರಯ, ರಸಿಕಾಶ್ರಯಗಳಿಂದ ಪೋಷಿತವಾಗಿದ್ದ ವೇಶ್ಯಾ ವೃತ್ತಿ, ನಾಡಿನ ರಸಿಕ ಜೀವನದ ಒಂದು ಕುರುವಾಗಿತ್ತೆ ಹೊರತು, ನಿಂದೆಗೆ ಗುರಿಯಾದಂತೆ ಕಾಣಿಸುವುದಿಲ್ಲ ಎಂದು ಬರೆಯುತ್ತಾರೆ. ಆಗಿನ ಕಾಲಕ್ಕೆ ಅಲ್ಲಿನ ವಾರಂಗನೆಯನ್ನು ಇರಿಸಿಕೊಳ್ಳುವದು ಒಂದು ಪ್ರತಿಷ್ಟೆಯ ಸಂಕೇತವಾಗಿತ್ತೆಂದು ಕಾಣುತ್ತದೆ. ಅದೊಂದು ಇತರ ವೃತ್ತಿಗಳಂತೆ ಗೌರವಿತ ವೃತ್ತಿಯಾಗಿತ್ತು. ಅವರು ಸಂಗೀತ ನೃತ್ಯ ವಿದ್ಯೆಗಳಲ್ಲಿ ಪರಿಣತಿ ಪಡೆದು ರಸಿಕರ ಮನೆ, ಮನಗಳನ್ನು ತುಂಬುವಲ್ಲಿ ಯಶಸ್ವಿಯಾಗಿದ್ದರು.

ಮಂಜುಳೆಯ ತಾಯಿ ಗರತಿಯಲ್ಲದ್ದಿದರೂ, ಗರತಿಗಿಂತಲೂ ಮಿಗಿಲಾಗಿ ಬಾಳಿದರಳು. ಅವಳನ್ನು ಇರಿಸಿಕೊಂಡವನ ಹೆಂಡತಿಗಿಂತ ಹೆಚ್ಚಾಗಿ ಅವನ ಮನಸ್ಸನ್ನು ಅರಿತು ಅವನ ಜೀವನ ತುಂಬಿದವಳು. ಅದೇ ಆದರ್ಶಗಳನ್ನು ರೂಢಿಸಿಕೊಂಡು ಬಂದ ಮಂಜುಳೆ ಅವಳ ಪಾಳ(ತಂದೆ)ನಂತ ಗಂಡಿನ ಆಶ್ರಯಕ್ಕೆ ಅರಸುತ್ತಾಳೆ. ಅವಳ ಹುಡುಕಾಟದಲ್ಲಿ ಮೈ ಮನಗಳು ಎರಡು ಒಂದೇ ಎಂದು ತಿಳಿದು ಬದುಕುವ ಪ್ರಯತ್ನ ನೆಡೆಸುತ್ತಾಳೆ. ಸುಬ್ರಾಯ ಉಳ್ಳೂರರು ಒಬ್ಬ ಪ್ರಮುಖ ವ್ಯಖ್ತಿಯಾಗಿ ಅವಳ ಬಾಳನ್ನು ತುಂಬುತ್ತಾರೆ. ಅವರ ನಿಸ್ವಾರ್ಥ ಪ್ರೀತಿ ಅವಳ ಮನಸ್ಸನ್ನು ತುಂಬುತ್ತದೆ.

ತನ್ನ ಆತ್ಮ ಕಥೆಯ ಕೊನೆಯಲ್ಲಿ ಮಂಜುಳೆ, "ನನ್ನ ತಂಬೂರಿಯ ದಂಡ, ಬುರುಡೆ ಉಳ್ಳೂರರು, ಅದರ ತಂತಿ ಆನಂದರು. ಅವರಿಬ್ಬರು ನನ್ನ ಜತೆಯಲ್ಲಿ ಅನುದಿನವು ಇರುವುದರಿಂದ ನಾನು ಸುಮಂಗಲೆ, ನಿತ್ಯ ಸುಮಂಗಲೆ" ಎನ್ನುತ್ತಾಳೆ.

ಅವಳ ನಂತರ, ಅವಳ ದತ್ತು ಮಗಳು ಶಾರಿ, ಮನಸ್ಸಿನ ಚಂಚಲತೆಯಿಂದಾಗಿ, ಅತಿ ಆಸೆಯಿಂದಾಗಿ ತಾಯಿಯಂತೆ ಬದುಕಲು ಅಸಾಧ್ಯವಾಗುತ್ತದೆ. ಅವಳ ಮಗಳು ಚಂದ್ರಿಗೆ ವೇಶ್ಯಾ ವೃತ್ತಿಯಲ್ಲಿ ಅಸಹ್ಯ ಮೂಡಿ, ಸಾಮನ್ಯರಂತೆ ಸಂಸಾರಿಯಾಗುವಲ್ಲಿ ಕಾದಂಬರಿ ಕೊನೆಗೊಳ್ಳುತ್ತದೆ. ಅಲ್ಲಿ ಇಲ್ಲಿ ಕಾದಂಬರಿ ಎಲ್ಲೆ ಮೀರಿದಂತೆ ಕಂಡರೂ, ಮನಸ್ಸುಗಳು ಸೇರಿ ದೇಹ ಒಂದಾದಾಗಲೇ ಜೀವನ ಪೂರ್ತಿ, ಮನುಷ್ಯ ಮನೋ-ದೇಹಿ, ದೇಹದ ಕಾಮನೆಗಳಾವುದು ಅಸಹ್ಯವಲ್ಲ ಎಂಬುದನ್ನು ಕಾರಂತರು ಮನ ಮುಟ್ಟಿಸಿ ಹೇಳಿದ್ದಾರೆ.