ಮರಳಿ ಮಣ್ಣಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಅಧ್ಬುತ ಕೊಡುಗೆ. ಶಿವರಾಮ ಕಾರಂತರಿಗೆ ಇನ್ನೊಬ್ಬರು ಸರಿಸಾಟಿಯಿಲ್ಲ. ಇದರ ಬಗ್ಗೆ ಶಿವರಾಮ ಕಾರಂತರೆ ಒಂದು ಕಡೆ ಹೀಗೆ ಹೇಳುತ್ತಾರೆ “ನನ್ನ ಊರಿನ ಬಡತನದ ಬಾಳ್ವೆಯೆ ಕತೆಯ ವಸ್ತುವಾಗಿದೆ. ಈ ಬಾಳ್ವೆಯ ಪ್ರಶ್ನೆ ಮೂರು ತರೆಮಾರುಗಳಲ್ಲಿ ಹೇಗೆ ಪ್ರತ್ಯುತ್ತರಗೊಳ್ಳುತ್ತದೆ ಎಂಬುದು ಇಲ್ಲಿ ಚಿತ್ರಿಸಲ್ಪಟ್ಟಿದೆ. ೧೮೫೦ ರಿಂದ ೧೯೪೦ರ ನಡುವಿನ ಸುಮಾರು ೧೦೦ ವರ್ಷಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಒಂದು ಹಳ್ಳಿಯಲ್ಲಿ ನೆಡೆದ ಬದಲಾವಣೆಗಳನ್ನೂ, ಆ ಬದಲಾವಣೆಗಳಿಗೆ ಕಾರಣವಾದ ಸಾಮಾಜಿಕ ಪ್ರಕ್ರಿಯೆಗಳನ್ನೂ, ಬ್ರಾಹ್ಮಣ ಕುಟುಂಬವೊಂದರ ಚೌಕಟ್ಟಿನಲ್ಲಿ ಈ ಕಾದಂಬರಿ ತುಂಬ ತಾಳ್ಮೆಯಿಂದ ಚರ್ಚಿಸುತ್ತದೆ.
ಇದು ಮೊದಲ ಬಾರಿಗೆ ಅಚ್ಚಾಗಿದ್ದು, ೧೯೪೨ರಲ್ಲಿ. ನಾನು ಓದಿದ ಪ್ರತಿ, ಸಪ್ನಾ ದವರು ೨೦೦೭ ರಲ್ಲಿ ಮುದ್ರಿಸಿದ್ದು. ಕಾದಂಬರಿ ಮೊದಲೊಮ್ಮೆ ಕಾಲೇಜಿನ ಲೈಬ್ರರಿಯಲ್ಲಿ ಸ್ವಲ್ಪ ಓದಿದ್ದೆ, ಆದರೆ ಏನೊ ಕಾರಣಾಂತರದಿಂದ ಮುಂದೆ ಓದಲಾಗಲಿಲ್ಲ. ಈ ಸಲ ಸಹ ಮನೆಯಲ್ಲಿ ತಂದಿಟ್ಟು ಎರಡು ಮೂರು ವರ್ಷಕ್ಕೂ ಮಿಕ್ಕಿರಬಹುದು. ಕಾದಂಬರಿ ಒಂದೆರಡು ಬಾರಿ ವಿದೇಶಗಳಿಗೂ ಹೋಗಿ ಬಂದಿದೆ. ನನಗೆ ಓದುವ ಸೌಭಾಗ್ಯ ಬಂದಿದ್ದು ಇತ್ತೀಚಿಗೆ.
ಕಾದಂಬರಿ ಸ್ವಲ್ಪ ನಿಧಾನವಾಗಿ ಸಾಗಿದರೂ ಎಲ್ಲೂ ಓದುವ ಆಸಕ್ತಿ ಕಡಿಮೆಯಾಗುವುದಿಲ್ಲ, ಅದು ಶಿವರಾಮ ಕಾರಂತರ ಕತೆ ಹೇಳುವ ಶೈಲಿ. ಕೊದಂಡರಾಮ ಐತಾಳರ ಮಗ ರಾಮ ಐತಾಳರಿಗೆ ಪಾರ್ವತಿಯ ಜೊತೆ ಮಳೆಗಾಲದಲ್ಲಿ ಮದುವೆ, ಅವರ ಕಾಲದ ನಂತರ ಐತಾಳರು ಪೌರೊಹಿತ್ಯದ ಕೆಲಸ ನೆಡೆಸಿ ಸಂಸಾರ ನೆಡೆಯುತ್ತಿರುತ್ತದೆ. ತಂಗಿ ಸರಸೊತಿಯು ಗಂಡ ತೀರಿದ್ದರಿದ್ದ ಅಣ್ಣನ ಮನೆಯಲ್ಲೆ ಇರುತ್ತಾಳೆ. ಈ ನಡುವೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ಎರಡನೆ ಮದುವೆ ಐತಾಳರಿಗೆ. ಹೀಗೆ ಬಂದ ಸತ್ಯಭಾಮೆಗೆ ಜನಿಸುವ ಮಗ ಲಚ್ಹ. ಇನ್ನೊಂದು ಮಗು ಸುಬ್ಬಿ. ಲಚ್ಚನ ಇಂಗ್ಲಿಶ್ ವಿದ್ಯಾಬ್ಯಾಸ, ಅವನು ತುಳಿವ ಕೆಟ್ಟ ಹಾದಿ, ಅವನ ಹೆಂಡತಿಯಾಗಿ ಬರುವ ನಾಗವೇಣಿ ಪಟ್ಟ ಪಾಡುಗಳು, ಕಷ್ಟದಲ್ಲಿ ಮಗನನ್ನು ಬೆಳೆಸಿದ ಬಗೆ. ಮನಸ್ಸಿನ ಮೇಲೆ ಒಂದು ಅಳಿಸಲಾರದ ಗುರುತನ್ನ ಮೂಡಿಸುತ್ತದೆ.
ಇದು ಮೂರು ತಲೆಮಾರುಗಳ ಜೀವನ ಚರಿತ್ರೆ, ದು:ಖವೇ ಜಾಸ್ತಿಯಾಗಿ ತುಂಬಿದೆ. ಕಾರಂತರ ಕೋಟ ಕನ್ನಡದ ಲೇಪ ತುಂಬಾ ಚೆನ್ನಾಗಿದೆ. ಓದುವಾಗ ಓಂದು ಬಗೆಯ ನಂಟು ಬಾಷೆಯಿಂದ ಬೆಳೆಯುತ್ತದೆ. ಅದೆ ಅವರ ಕಾದಂಬರಿಗಳ ವೈಶಿಷ್ಟ್ಯ.
ಇಲ್ಲಿ ಕಡಲ ತೀರದ ಜನರ ಜೀವನವಿದೆ, ಅವರ ನೋವು ನಲಿವುಗಳಿವೆ, ಆಚಾರ ವಿಚಾರಗಳಿವೆ. ಕನ್ನಡ ಸಾಹಿತ್ಯಗಳಲ್ಲಿ ಒಂದು ಮುಖ್ಯ ಕೃತಿ. ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ ಕಾವ್ಯ, ಅದರಿಂದ ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟಿದೆ. ಅವರ ಪ್ರತಿಯೊಂದು ಕಾದಂಬರಿಯನ್ನೆ ಅದ್ಯಯನ ಮಾಡಿ ಅದರಲ್ಲ ಪದವಿ ಪಡೆವಷ್ಟು ವಿಷಯಗಳಿವೆ. ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ವಿಷಯಗಳಿವೆ.